ಇದೇ ತಾನೇ ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿರುವ 84 ಪುಟಗಳ 2011-12ನೇ ಶೈಕ್ಷಣಿಕ ವರ್ಷದ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ. ದಾಖಲಾತಿ, ಕ್ರೀಡೆ, ಸಾಂಸ್ಕೃತಿಕ ಮತ್ತು ಇತರೆ ಚಟುವಟಿಕೆಗಳ ಮಾರ್ಗಸೂಚಿಯಲ್ಲಿ ಹತ್ತನೇ ತರಗತಿಯ ತೇರ್ಗಡೆಯಾದವರಿಗಾಗಿಯೇ ಪದವಿ ಪೂರ್ವ ಶಿಕ್ಷಣದ ಅವಕಾಶಗಳನ್ನು ಪ್ರಕಟಿಸಿದೆ. (ಇದರ ಉಚಿತ ಪ್ರತಿ ಅಂತರಜಾಲದಲ್ಲಿ ಲಭ್ಯವಿದ್ದು ಹೆಚ್ಚಿನ ವಿವರಗಳಿಗೆ ನೋಡಿ :www.pue.kar.nic.in)
12 ಭಾಷಾ ವಿಷಯಗಳು ಮತ್ತು ಐಚ್ಛಿಕ ವಿಷಯಗಳ ಪೈಕಿ ಕಲಾ (ಆರ್ಟ್ಸ್) ವಿಷಯಗಳಲ್ಲಿ 36, ವಾಣಿಜ್ಯ ವಿಷಯಗಳಲ್ಲಿ 08 ಮತ್ತು ವಿಜ್ಞಾನ ವಿಷಯಗಳಲ್ಲಿ 7 (P C M B / P C M C / P C M E / P C M S / P C B HSc / P C M G / C B Ps HSc ) ವಿವಿಧ ಕಾಂಬಿನೇಷನ್‌ಗಳನ್ನು ಪದವಿ ಪೂರ್ವ ಶಿಕ್ಷಣಕ್ಕಾಗಿ ಆಯ್ಕೆಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ದಂಡಶುಲ್ಕವಿಲ್ಲದೇ ಬರುವ ಜೂನ್ 15 ದಾಖಲಾತಿಗೆ ಕೊನೆಯ ದಿನ. ಜೂನ್ 16 ರಿಂದ 30 ರವರೆಗೆ ರೂ.420 ರಿಂದ ರೂ.1820 ರವರೆಗೆ ದಂಡಶುಲ್ಕ ಸಹಿತ ದಾಖಲಾಗಲು ಅವಕಾಶವಿದೆ. ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಮಾತ್ರ ದಾಖಲಾಗಲು ಕೊನೆಯ ದಿನ ಬರುವ ಜುಲೈ 25 ಆಗಿರುತ್ತದೆ. ಈ ವೇಳಾಪಟ್ಟಿಯನ್ನು ರಾಜ್ಯದ ಎಲ್ಲಾ ಪದವಿಪೂರ್ವ ಕಾಲೇಜುಗಳು ಕಡ್ಡಾಯವಾಗಿ ಅನುಸರಿಸುತ್ತವೆ.
ಆಯ್ಕೆ ಏತಕ್ಕಾಗಿ - ಬದಲಾವಣೆ ಯಾರಿಗಾಗಿ? ಈ ಹಿಂದೆ ಎಸ್.ಎಸ್.ಎಲ್.ಸಿ ನಂತರ ಪಿ.ಯು.ಸಿ, ಪದವಿ, ಡಿ.ಇಡಿ. ಅಥವಾ ಬಿ.ಇ.ಡಿ., ಎಂ.ಎ. ಎಂಬ ಒಂದು ಸರಣಿ, ಕಾನೂನು, ತಾಂತ್ರಿಕ ಪದವಿ, ವೈದ್ಯಕೀಯ ಕೋರ್ಸುಗಳ ಇನ್ನೊಂದು ಸರಣಿಯ ಪ್ರಮುಖ ಆಯ್ಕೆಗಳು ಇದ್ದಕ್ಕಿದ್ದಂತೆ ಬದಲಾಗಿ ಯಾವುದಕ್ಕೆ ಸೇರಿದರೆ ಸ್ಕೋಪ್ ಜಾಸ್ತಿ, ಯಾವುದರಿಂದ ತಕ್ಷಣ ಲಾಭ ಆಗುತ್ತೆ ಎನ್ನುವ ಮಾನದಂಡವೇ ಪ್ರಮುಖವಾಗಿ ಬಾಲವೇ ನಾಯಿಯನ್ನು ಆಡಿಸುವ ಪರಿಸ್ಥಿತಿ ಉದ್ಭವಿಸಿದೆ.
ವಿದ್ಯಾರ್ಥಿಗಳ ಆಸಕ್ತಿ, ಪರಿಶ್ರಮ, ದೀರ್ಘಾವಧಿಯಲ್ಲಿ ಅವರ ದೈಹಿಕ-ಮಾನಸಿಕ-ಸಾಮಾಜಿಕ ಸಂಬಂಧಗಳ ಮೇಲೆ ಆಗುವ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೇ ಕಬ್ಬಿನ ಸಿಪ್ಪೆಯಂತೆ ಹಿಂಡಿ ಹಿಪ್ಪೆಮಾಡುವ ಒತ್ತಡದ ದುಡಿಮೆಗೆ, ತಕ್ಷಣದ ಲಾಭಕ್ಕೆ ಅನುವಾಗುವ ಕೋರ್ಸುಗಳ ಆಯ್ಕೆಯಿಂದ, ಕುರಿಮಂದೆಯಂತೆ ನುಗ್ಗುತ್ತಿರುವ ಯುವಪಡೆ ಅತ್ಯುತ್ತಮವಾದದ್ದೇನನ್ನೂ ಸಾಧಿಸಲು ವಿಫಲವಾಗಿ ಚಿಕ್ಕ ವಯಸ್ಸಿಗೇ ರಿಟೈರ್ಡ್ ಆಗುವಷ್ಟು ಸುಸ್ತಾಗುತ್ತಿದ್ದಾರೆ. ಜೀವನದ ಜಂಜಾಟವೇ ಬೇಡ, ವೈವಾಹಿಕ ಬಂಧಗಳೂ ಬೇಡ, ಜವಾಬ್ದಾರಿಯಂತೂ ಬೇಡವೇ ಬೇಡ. ಉದ್ದಿಮೆಗಳ ಪೈಪೋಟಿಯಲ್ಲಿ ನುಜ್ಜು ಗುಜ್ಜಾಗುತ್ತಿರುವ ಉದ್ಯೋಗಿಗಳು, ನಿಗದಿತ ಸಮಯದ ಒಳಗಾಗಿ ಮಾಡಿ ಮುಗಿಸಲೇಬೇಕಾದ ಪ್ರಾಜೆಕ್ಟ್‌ಗಳ ಒತ್ತಡ, ಸಮವಯಸ್ಕರ ನಡುವಿನ ಸ್ಪರ್ಧೆಯಲ್ಲಿ ಇತ್ತೀಚಿಗೆ ಕಂಡುಬರುತ್ತಿರುವ ಯಶಸ್ಸು ಮತ್ತು ಹಿಂದುಳಿಯುವಿಕೆಯ ಭಯ ಇತ್ಯಾದಿಗಳ ಕಾರಣದಿಂದ ಸಾಂಪ್ರದಾಯಿಕ ಆಯ್ಕೆ ಯಾವ ಉಪಯೋಗಕ್ಕೂ ಬಾರದು ಅನ್ನಿಸಿ ಸ್ಕೋಪ್ ಜಾಸ್ತಿ ಇರುವ ವಿಷಯಗಳನ್ನೇ ಆಯ್ದುಕೊಳ್ಳುವಂತಾಗಿದೆ. ಯಾವುದೋ ಒಂದಕ್ಕೆ ಸ್ಕೋಪ್ ಇದೆ ಅಂದ ಮಾತ್ರಕ್ಕೆ ಅದನ್ನೇ ಅನುಸರಿಸಿದರೆ ಉಳಿದವು ಹಿಂದೆ ಬೀಳುವ ಮತ್ತು ಸ್ವಲ್ಪ ಕಾಲದ ನಂತರ ಹಿಂದೆ ಬಿದ್ದ ವಿಷಯಗಳಲ್ಲಿ ಅಗತ್ಯ ಪೈಪೋಟಿ ನೀಡುವ ಜನರೇ ಇಲ್ಲದಂತಾದಾಗ ಮತ್ತೆ ಅದಕ್ಕೆ ಸ್ಕೋಪ್ ಸಿಗುವ ಏರಿಳಿತದ ಆಟ ನಡೆದೇ ಇದೆ. ಇದಕ್ಕೆ ಕೊನೆಯ ಇಲ್ಲ. ಆದರೂ ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇದ್ದರೆ ನಮ್ಮ ಆಯ್ಕೆಯನ್ನು ಸಮರ್ಪಕ ಎನ್ನುವ ರೀತಿಯಲ್ಲಿ ನಿಭಾಯಿಸಬಹುದು. ಹಣಪ್ರಪಂಚದಲ್ಲಿ ಇವೆಲ್ಲಾ ಸಾಮಾನ್ಯ. ನೆಂಟರಿಷ್ಟರಲ್ಲಿ, ಅಕ್ಕಪಕ್ಕದವರಲ್ಲಿ ತಾವೂ ಕಡಿಮೆ ಇಲ್ಲ ಎನ್ನುವ ಒಣ ಪ್ರತಿಷ್ಠೆ ಈ ಮನೋಭಾವದ ಬದಲಾವಣೆಗೆ ಬಹುಮುಖ್ಯ ಕಾರಣ. ಗೆದ್ದೆತ್ತಿನ ಬಾಲ ಹಿಡಿಯುವವರನ್ನು, ಗೆದ್ದ ಕೋರ್ಸಿನ ಹಿಂದೆ ಬೀಳುವವರನ್ನು, ಒಂದು ಕುರಿ ಹಳ್ಳಕ್ಕೆ ಬಿದ್ದರೆ ಹಿಂದೆ ಮುಂದೆ ಯೋಚಿಸದೆಯೇ ತಾವೂ ಹಳ್ಳಕ್ಕೆ ಬೀಳಲು ಸಿದ್ಧವಿರುವ ಕುರಿಯಂಥವರನ್ನು ತಡೆಯುವವರು ಯಾರು?

No comments:
Post a Comment