Tuesday 5 March 2013


ಭಾರತದ ಏಕೈಕ ಸ್ತ್ರೀ ಸೈನ್ಯ ಸೇನಾನಿ ಬೆಳವಡಿ ಮಲ್ಲಮ್ಮ.
ವಿಶ್ವದ ಇತಿಹಾಸವನ್ನು ನೋಡಿದರೆ ಸಂಖ್ಯೆಯಲ್ಲಿ ಅಲ್ಲದಿದ್ದರೂ ಗುಣಮಟ್ಟದ ದೃಷ್ಟಿಯಿಂದ ಪುರಷರಷ್ಟೇ ಸ್ತ್ರೀಯರೂ ಯುದ್ದಗಳಲ್ಲಿ ಹೋರಾಡಿದ್ದಾರೆ. ಕ್ರಿ.ಪೂ. 1200 ರಲ್ಲಿ ಚೀನಾದ ಪುಹಾಒ ಎಂಬಾಕೆ ಮೂರು ಸಾವಿರ ಸೈನಿಕರ ಸೇನಾನಿಯಾಗಿದ್ದರೆ, ಕಿ.ಪೂ. 400ರ ಹೈಡ್ನ ಎಂಬ ಗ್ರೀಕ್ ಈಜುಗಾರ್ತಿ ತನ್ನ ತಂದೆ ಜತೆ ಸೇರಿ ಶತ್ರುಗಳ ಹಡಗುಗಳನ್ನು ಮುಳಗಿಸಿ ಜಯ ಸಂಪಾದಿಸಿಕೊಟ್ಟಳು. ಕಿ.ಪೂ. 300ರ ಗ್ರೀಸಿನ ಅರಕಿದಮಿಯ ಎಂಬ ರಾಜಕುಮಾರಿ ಶತ್ರುಗಳು ತನ್ನನ್ನು ಹಿಡಿದರೆ ತಾನೇ ಸಾಯಲು ಸಿದ್ಡವೆಂದು ಘೋಷಿಸಿ ಮಹಿಳಾ ಸೈನಿಕರ ದಳಪತಿಯಾಗಿ, ಕಿ.. 248ರ ವಿಯಟ್ನಾಮಿನ ರಾಣಿ ಸಾವಿರಾರು ಪುರುಷ-ಸ್ತ್ರೀ ಯೋಧೆಯರ ಸೈನ್ಯದ ದಳಪತಿಯಾಗಿ ಯುದ್ಡ ಮಾಡಿದ್ದಾರೆ. ಇಬನ್ ಬಟೂಟ, ಕಿ.. 1354 ರಲ್ಲಿ ಆಗ್ನೇಯ ಏಷ್ಯಾದಲ್ಲಿ ಸ್ತ್ರೀ ಸೈನ್ಯವನ್ನು ತಾನು ಕಂಡುದಾಗಿ ದಾಖಲಿಸಿದ್ದಾನೆ.
ಭಾರತದಲ್ಲಿ ಕರ್ನಾಟಕದ ಕಲ್ಯಾಣ ಚಾಲುಕ್ಯರ ಅಕ್ಕಾದೇವಿ (11) ಒಬ್ಬ ಯೋಧೆ. ಆಂಧ್ರದ ಕಾಕತೀಯ ವಂಶದ ರುದ್ರಮ ದೇವಿಯ (13) ಬಿರುದು 'ರಾಯಗಜಕೇಸರಿ' - ದೇವಗಿರಿ ಯಾದವರನ್ನು ಸೋಲಿಸಿದ ಶಿಲ್ಪವಿರುವ ಶಿಲಾಶಾಸನದ ಮೇಲೆ ಅವಳನ್ನು ಕಠಾರಿ, ಗುರಾಣಿ ಹಿಡಿದು ಸಿಂಹದ ಮೇಲೆ ಕುಳಿತಂತೆ ಕೆತ್ತಲಾಗಿದೆ. ಅಹಲ್ಯಾಬಾಯಿ ಹೋಳ್ಕರ್ (1780), ಝಾನ್ಸಿ ಲಕ್ಷ್ಮೀಬಾಯಿ (1858) ಇವರೂ ಯುದ್ಧ ಧೀರೆಯರು, ಲಕ್ಷ್ಮೀಬಾಯಿಯಂತೂ 'ಯುದ್ದವೇ ನನ್ನ ಧರ್ಮ' ಎಂದು ಘೋಷಿಸಿ ತನಗೆ ದತ್ತು ಮಗನಾದ ದಾಮೋದರ ರಾವ್ ರಾಜನಾಗುವ ಹಕ್ಕನ್ನು ಪಡೆದಿದ್ದಾನೆ ಎಂದು ಹೇಳಿ ಬ್ರಿಟಿಷರ ವಿರುದ್ಢ ಹೋರಾಡಿ ಮಡಿದಳು. ಕರ್ನಾಟಕದ ಕಿತ್ತೂರು ಚನ್ನಮ್ಮ (1820) ಕುದುರೆ ಸಾವಾರಿ, ಬಿಲ್ವಿದ್ಯೆ, ಬೇಟೆ ಇತ್ಯಾದಿ ಕ್ಷಾತ್ರ ವಿದ್ಯೆಯಲ್ಲಿ ಪರಿಣತಳಾಗಿ, ಅವಳ ಕೋಟೆ ವಶಪಡಿಸಿಕೊಳ್ಳಲು ಬಂದ ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಹೋರಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮೊದಲು ಕಿಚ್ಚು ಹಚ್ಚಿದ ಶೂರೆ. (ಮೊದಲ ಕಿಚ್ಚ ಹಚ್ಚಿದು ಟಿಪ್ಪು ಅಲ್ಲ)
ಕರಾವಳಿ ಪ್ರದೇಶದ ಉಳ್ಳಾಲದ ಚೌಟರಾಣಿ ಅಬ್ಬಕ್ಕದೇವಿ (1595) ಮತಾಂತರ, ಕಪ್ಪಕಾಣಿಕೆ ವಸೂಲಿಗಳಲ್ಲಿ ನಿರತರಾಗಿದ್ದ ಪೋರ್ಚಗೀಸರ ನೌಕಾಪಡೆಯನ್ನು ಸೋಲಿಸಿ ಜಯಗಳಿಸಿ ಅಂದಿನ ಕಾಲಕ್ಕೆ ವಿಶ್ವವಿಖ್ಯಾತಳಾಗಿದ್ದಳು. ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಬೆಳವಡಿ ಮಲ್ಲಮ್ಮಳ (1690) ರೋಮಾಂಚಕ ಜೀವನಗಾಥೆಯನ್ನು ನೋಡೋಣ. ಮಲ್ಲಮ್ಮನ ವಂಶಸ್ಥರು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ಸೋದೆಯ ರಾಜರು. ಅವರು ಲಿಂಗಾಯತ ವರ್ಗದ ಮಲವಗೌಡರು (ಮಲವ=ಮಲೆಪ=ಬೆಟ್ಟ ಪ್ರದೇಶದ ರಾಜ) ಆ ವಂಶದ ಮಧುಲಿಂಗ ನಾಯಕನಿಗೆ 1660 ರಲ್ಲಿ ಮಗಳಾಗಿ ಜನಿಸಿದ ಮಲ್ಲಮ್ಮಾಜಿ, ಆಕೆಯ ಅಣ್ಣ ಸದಾಶಿವನಾಯಕ ಇಬ್ಬರೂ ಒಳ್ಳೆಯ ಶಿಕ್ಷಣವನ್ನು ಪಡೆದರು.
ಮಧುಲಿಂಗನಾಯಕ ವ್ಯವಸ್ಥೆ ಮಾಡಿದ್ದ ಶಾಲೆಯಲ್ಲಿ ಇನ್ನೂರು ಹುಡುಗರು, ಇನ್ನೂರು ಹುಡುಗಿಯರಿದ್ದರು. ಶಿಕ್ಷಣ ನೀಡುವುದರಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯ ಮಾಡಲಿಲ್ಲ. ಅವರಲ್ಲಿ ಹವ್ಯಕ-ಮಾಧ್ವ ಬ್ರಾಹ್ಮಣರಲ್ಲದೆ ಒಂದನೂರು ಒಕ್ಕಲಿಗರು (ಆ ಜನಾಂಗ ಸಿರ್ಸಿ ತಾಲೂಕಿನಲ್ಲಿದೆ) ಇಪ್ಪತ್ತು ಲಿಂಗಾಯತರೂ ಇದ್ದರೂ. ಹದಿನಾಲ್ಕು ವರ್ಷದ ಹೊತ್ತಿಗೆ ಸದಾಶಿವನಾಯಕ, ಮಲ್ಲಮ್ಮ ಕನ್ನಡ, ಸಂಸ್ಕೃತಗಳಲ್ಲಿ ಕವಿತೆ ರಚನೆ ಮಾಡುವಷ್ಟು ಪರಿಣತಿ ಪಡೆದರು- ಆ ಶಾಲೆಯ ವಿದ್ಯಾರ್ಥಿಗಳಲ್ಲೆಲ್ಲ ಮಲ್ಲಮ್ಮ ಅತ್ಯಂತ ಮೇಧಾವಿ ಎನಿಸಿಕೊಂಡಿದ್ದಳು. ಅವಳ ಕೃತಿಗಳು ದೊರಕದಿದ್ದರೂ ಅಣ್ಣ ಸದಾಶಿವ ನಾಯಕನ ಭಜನೆ ಪದಗಳು, ಶೃಂಗಾರದ 'ಜಾವಡಿ' ಪದ್ಯಗಳು ದೊರಕಿವೆ. ಶಾಲೆಯ ಮಕ್ಕಳಿಗೆ ಯುದ್ಧ ಶಿಕ್ಷಣವನ್ನು ನೀಡಲು ಉತ್ತರ ಭಾರತದಿಂದ ರಣವೀರ ಸಿಂಗ್ ಎಂಬ ಸಿಖ್ ಜನಾಂಗದ ವ್ಯಕ್ತಿಯನ್ನು ನೇಮಕ ಮಾಡಲಾಗಿತ್ತು. ಮಲ್ಲಮ್ಮನಂತೂ ತನ್ನ ಯೌವನದಲ್ಲಿ ಬಿಲ್ಲು ಬಾಣ, ಆಶ್ವಾರೋಹಣ, ಭಲ್ಲೆ, ಖಡ್ಗ ಪ್ರಯೋಗಗಳಂತಹ ಕ್ಷಾತ್ರವಿದ್ಯೆಯ ನಿಪುಣಳಾದಳು; ಅವಳೇ ಅರಮನೆಯಲ್ಲಿ ಅಡುಗೆ ಮಾಡಿ ತಂದೆಗೆ ಉಣಬಡಿಸಿ ತಾಯಿ ಜತೆ ಉಟ ಮಾಡುತ್ತಿದ್ದಳು. ಒಮ್ಮೆ ಹೂಲಿಯ ಪಂಚವಣ್ಣಿಗಿ ಮಠದ ಗುರುಗಳು ಗೋಕರ್ಣಕ್ಕೆ ಹೋಗಿ ವಾಪಾಸಾಗುವಾಗ ಸೋದೆಗೆ ಬಂದರು. ಮಲ್ಲಮ್ಮನ ವಿನಯ ಗಾಂಭೀರ್ಯ ಮೆಚ್ಚಿಕೊಂಡ ಅವರು ಅವಳಿಗೆ ಹದಿನಾರನೇ ವಯಸ್ಸಿನಲ್ಲಿ ಹುಲಿಯ ಕಂಟಕವಿದೆಯೆಂದು ಭವಿಷ್ಯ ನುಡಿದಾಗ ಮಧುಲಿಂಗ ನಾಯಕ ಬೆಚ್ಚಿಬಿಂದ. ನಾನೇ ಸ್ವತಃ ಹುಲಿಗಳನ್ನು ಎದುರಿಸಬಲ್ಲೆ, ಭಯಪಡಬೇಡಿ ಎಂದು ಧೈರ್ಯ ಹೇಳಿದರೂ ಸಹಜವಾಗಿಯೇ ತಂದೆಗೆ ಸಮಾಧಾನವಾಗಲಿಲ್ಲ. ಹುಲಿಯ ಬೇಟೆಯಲ್ಲಿ ನಿಷ್ಣಾತನಾದ ವರನೇ ತನ್ನ ಮಗಳಿಗೆ ಸರಿ ಎಂದು ನಿಶ್ಚಯಿಸಿ, ಒಂದು ತಿಂಗಳಲ್ಲಿ ತನ್ನ ವಯಸ್ಸಿಗಿಂತ ಹೆಚ್ಚಿನ ಸಂಖ್ಯೆಯ, ಕನಿಷ್ಠ ಒಂದು ಹುಲಿಯನ್ನಾದರೂ ಹೊಡೆದಿರುವ ವರನಿಗೆ ತನ್ನ ಮಗಳನ್ನು ಕೊಡುವುದಾಗಿ ಪತ್ರ ಕಳುಹಿಸಿದಾಗ ಭಾರತದ ಕಾಶ್ಮೀರ, ಜಯಪುರ, ಪಶ್ಚಿಮ ಬಂಗಾಳ ಇತ್ಯಾದಿ ಕಡೆಗಳಿಂದ ರಾಜಕುಮಾರರು ತಾವು ಕೊಂದಿದ್ದ ಹುಲಿಗಳ ದೇಹಗಳನ್ನು ತರುತ್ತಾರೆ. ಕೆಲವರು ಅವರ ವಯಸ್ಸಿನ ಅರ್ಧದಷ್ಟು ಸಂಖ್ಯೆಯ, ಮುಕ್ಕಾಲು ಸಂಖ್ಯೆಯ ಹುಲಿಗಳನ್ನು ಹೊಡೆದಿದ್ದರು. ಆದರೆ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಬೆಳವಡಿಯ ಈಶಪ್ರಭು ಎಂಬ ಇಪ್ಪತ್ತು ವರ್ಷ ವಯಸ್ಸಿನ ರಾಜಕುಮಾರ ತಾನು ತಿಂಗಳಲ್ಲಿ ಹೊಡೆದ ಇಪ್ಪತ್ತೊಂದು ಹುಲಿಗಳ ದೇಹಗಳನ್ನು ಸ್ವಯಂವರದ ದಿನ ತೋರಿಸಿದಾಗ ಅವನಿಗೆ ಮಲ್ಲಮ್ಮಳನ್ನು ಕೊಟ್ಟು ಮದುವ ಮಡಲಾಯಿತು. ವಧುವಿನ ತಂದೆ ಇಂತಹ ಕರಾರು ಹಾಕಿದ್ದು ಎಲ್ಲೂ ಕಂಡರಿಯದ್ದು, ಕೇಳರಿಯದ್ದು. ಮಧುಲಿಂಗನಾಯಕ ಈಶಪ್ರಭವನ್ನು ಒಪ್ಪಿಕೊಂಡು ಅವನಿಗೆ ಸಂಭ್ರಮದಿಂದ ಮಗಳನ್ನು ಕೊಟ್ಟು ವೈಭವದಿಂದ ಮದುವೆ ಮಾಡಿದ್ದ ಆ ಮದುವೆಗೆ ತನ್ನ ಲಿಂಗಾಯತ ಧರ್ಮ' ಪದ್ಧತಿಗೆ ಅನುಗುಣವಾಗಿ ಪಂಚಪೀಠಾಧೀಶರನ್ನು ಹಾಗೆಯೇ ಮಾಧ್ವ ಗುರುಗಳನ್ನು ಆಹ್ವಾನಿಸಿ ಅವರಿಗೆ ಸೂಕ್ತ ಕಾಣಿಕೆ ನೀಡಿದ.
ಬೆಳವಡಿಯಲ್ಲಿ ಮಲ್ಲಮ್ಮ ಈಶ ಪ್ರಭು ಬಹು ಸುಖ ಜೀವನವನ್ನು ನಡೆಸುತ್ತಾರೆ. ಒಮ್ಮೆ ಅವರು ಗೋರ್ಕಣಕ್ಕೆ ಹೋಗಿ ವಾಪಸಾಗುತ್ತ ದಾರಿಯ ಸರೋವರದ ಪಕ್ಕ ವಿಶ್ರಾಂತಿ ಪಡೆಯುತ್ತಾರೆ. ಮಲ್ಲಮ್ಮನ ತೊಡೆ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಈಶ ಪ್ರಭು ನಿದ್ದೆಗೆ ಜಾರಿದಾಗ ಇದ್ದಕ್ಕೆದಂತೆ ಎರಡು ಹುಲಿಗಳು ಕಾಡಿನಿಂದ ಬಂದು ಅವರ ಮೇಲೆ ಬಿದ್ದಾಗ ರಾಣಿಯು ಧೈರ್ಯದಿಂದ ಒಂದು ಹುಲಿಯನ್ನು ಕೊಲ್ಲುತ್ತಿದಂತೆ ಇನ್ನೊಂದು ಹುಲಿ ಕುದುರೆ ಮೇಲೆ ಹಾರಿ ಹಾಗೇ ತಪ್ಪಿಸಿಕೊಂಡು ಹೋಯಿತು. ಈಶ ಪ್ರಭು ಎಚ್ಚೆತ್ತು ತನ್ನ ಪತ್ನಿಗೆ-'ನಿನಗಲ್ಲ ನನಗೆ ಹುಲಿ ಕಂಟಕ ಇದ್ದದ್ದು. ಅದನ್ನು ತಪ್ಪಿಸಿದೆ' ಎಂದು ಹಾಸ್ಯವಾಗಿ ನುಡಿದ. ಮುಂದೆ ಅವರಿಗೆ ನಾಗಭೂಷಣ ಎಂಬ ಮಗ ಹುಟಿದ. ಮಲ್ಲಮ್ಮಾಜಿ ಆ ಬಳಿಕ ಮಾಡಿದ ಅಪೂರ್ವ ಕೆಲಸವೆಂದರೆ ತನ್ನ ನಾಡಿನ ಯುವತಿಯರನ್ನು ಸೇರಿಸಿ ಸ್ತ್ರೀ ಪಡೆ ಕಟ್ಟಿ ಅದಕ್ಕೆ ತಾನೇ ಶಿಕ್ಷಣ ನೀಡಿ, ತನ್ನ ಗಂಡನ ಪುರುಷ ಸೈನ್ಯಕ್ಕೆ ಪೂರಕವಾಗಿ ಅದನ್ನು ಬೆಳೆಸುತಾಳೆ. ಅವರಿಬ್ಬರೂ ಸುಖವಾಗಿದ್ದರು; ಪ್ರಜೆಗಳೂ ತೃಪ್ತಿಯಿಂದಿದ್ದರು. 1676 ರ ಶಿವಾಜಿ ದಕ್ಷಿಣ ಕರ್ನಾಟಕದ ಎಷ್ಟೋ ಭಾಗಗಳನ್ನು ಸ್ವಾಧೀನಪಡಿಸಿಕೊಂಡು ವಾಪಸ್ ಹೋಗುವಾಗ ಹಂಪಿಯ ವಿರೂಪಾಕ್ಷನ ದರ್ಶನ ಮಾಡಿ ಅಲ್ಲಿಯ ಭಗ್ನ ಅವಶೇಷಗಳನ್ನು ಕಂಡು ದುಃಖಿತನಾಗಿ 'ಹಿಂದವೀ ಸಾಮ್ರಾಜ್ಯ ಸ್ಥಾಪಿಸಲು ಪ್ರತಿಜೆ ತೊಟು, ಆನೆಗೊಂದಿ ಅರಸರ ಗೌರವ ಸ್ವೀಕರಿಸಿ, ಕೊಪ್ಪಳದ ಕೋಟಿ ವಶಪಡಿಸಿಕೊಂಡು ಧಾರವಾಡ ಜಿಲ್ಲೆಯ ಯಾದವಾಡದಲ್ಲಿ ತಂಗುತ್ತಾನೆಅವನ ಸೈನ್ಯದಲ್ಲಿ ಬಹುಸಂಖ್ಯೆಯ ಕುದುರೆ, ಆನೆ, ಕಾಲಾಳುಗಳು ಮಾತ್ರವಲ್ಲದೆ ತೋಪು ಹಾರಿಸುವವರೂ ಇದ್ದರು. ಬೆಳವಡಿಯ ಈಶಪ್ರಭು ಅವನನ್ನು ಬರಮಾಡಿಕೊಂಡು ಗೌರವಿಸುವುದರಲ್ಲಿದ್ದ. ಅವನ ಸೈನ್ಯ ಚಿಕ್ಕದಾಗಿತ್ತು. ಆದರೆ, ಅವನ ಪ್ರತಿನಿಧಿಯನ್ನು ಶಿವಾಜಿಯ ಸೈನಿಕರು ಆಪಮಾನ ಪಡಿಸಿದರು ಮತ್ತು ಶಿವಾಜಿಗೆ ತಿಳಿಸದೆ ಬೆಳವಡಿ ಕೋಟೆ ಮೇಲೆ ದಾಳಿ ಮಾಡಿದಾಗ, ತನ್ನ ಗಂಡನ ನೇತೃತ್ವದ ಪುರುಷ ಸೈನ್ಯವನ್ನು ಹಿಂದಕ್ಕಿ ಮಲ್ಲಮ್ಮ ತನ್ನ ಸ್ತ್ರೀ ಸೈನ್ಯದ ಜತೆ ಹೋಗಿ ಹಲವು ಮರಾಠಿಗರನ್ನು ಕೊಂದಳು.; ಮರಾಠಿ ಸೈನ್ಯ ಸೋತು ಹಿಂದಿರುಗಿತ್ತು. ಮುಂದೆ ನಡೆದ ಯುದ್ಧದಲ್ಲಿ ಈಶಪ್ರಭು ಗಾಯಗೊಂಡು ಸಾಯುವ ಮುನ್ನ 'ಶಿವಾಜಿಯನ್ನು ಸೋಲಿಸಲೇಬೇಕು' ಎಂದು ಪತ್ನಿಗೆ ಹೇಳುತ್ತಾನೆ. ವಿಧವೆಯಾದ ಮಲ್ಲಮ್ಮ ಹಠತೊಟ್ಟು ಶಿವಾಜಿಯನ್ನು ಎದುರಿಸಿ ಕ್ಷಮಾಪಣೆ ಕೇಳದಿದ್ದರೆ ಅವನನ್ನು ಕೊಲ್ಲುವುದಾಗಿ ಹೆದರಿಸಿದಾಗ, ಶಿವಾಜಿ ಅವಳ ಕಾಲಿಗೆ ಬಿದ್ದು 'ನೀನು ನನ್ನ ತಾಯಿ ಜಗದಂಬೆಯಂದು ' ಸ್ತೋತ್ರ  ಮಾಡಿದ. ಅವಳು ಕ್ಷಮಿಸಿದ ಮೇಲೆ ಇಬ್ಬರಿಗೂ ಸ್ನೇಹದ ಒಪ್ಪಂದವಾಯಿತು. (ಅವಳ 'ಯುದ್ದ ಚಾಪಲ್ಯ ಅಲೌಕೀ-ಅಸಾಮಾನ್ಯ). ಶಿವಾಜಿ, ಮಲ್ಲಮ್ಮಾಜಿಯರ ಸಮರವು ಉತ್ಸವದಲ್ಲಿ ಪಠ್ಯವಸಾನವಾದುದರಿಂದ ಕೃತಿಗೆ ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ ಎಂದೇ ನಾಮಕರಣ ಮಾಡಲಾಗಿದೆ. ಆ ಸಂಗತಿಯು ಧಾರವಾಡ ಸಮೀಪದ ಯಾದವಾಡದ ವೀರಗಲ್ಲಿನ ಮೇಲೆ ಶಿಲ್ಪರೂಪದಲ್ಲಿ ಮೂಡಿದೆ. ಮೇಲಿನ ಸಂಗತಿಗಳು ಕರ್ನಾಟಕದ ಅತ್ಯಂತ ಸ್ಫೂರ್ತಿಯುತ ಸಾಂಸ್ಕೃತಿಕ ದಾಖಲೆ ಎನ್ನಬಹುದಾದ 'ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ' ಎಂಬ ಮರಾಠಿ ಕೃತಿಯಲ್ಲಿ ದಾಖಲಾಗಿದೆ. ಅದನ್ನು ಬರೆಯಿಸಿದ ಶಿವಾಜಿಯ ಸೊಸೆಗೆ ತನ್ನ ಮಾವನೆಂದರೆ ಅತ್ಮಭಿಮಾನ ಅವಳು ಮಲ್ಲಮ್ಮನನ್ನೇ ಕೊಲ್ಲಾಪುರಕ್ಕೆ ಕರೆಯಿಸಿಕೊಂಡು ಅವಳಿಂದ ನೇರ ಮಾಹಿತಿ ಪಡೆದು, ಶೇಷೋ ಮುತಾಲಿಕ್ ನಿಂದ 1717 ರಲ್ಲಿ ಬರೆಯಿಸಿದ ಕೃತಿಯನ್ನು ನೋಡಿ ಎಲ್ಲವೂ ಸತ್ಯವಾಗಿದೆಯೆಂದು ಬಹುಮಾನ ಕೊಡುತ್ತಾಳೆ. ಎಂದರೆ ಈ ದಾಖಲೆಯಲ್ಲಿರುವುದೆಲ್ಲ ಅಪ್ಪಟ ಇತಿಹಾಸ. 1678 ರ ಒಬ್ಬ ಇಂಗ್ಲಿಷ್ ಅಧಿಕಾರಿ ಬರೆದ ಪತ್ರದಲ್ಲಿ ಹಲವು ಶೂರರಾಜರನ್ನು ಶಿವಾಜಿ ಸೋಲಿಸಿದರೂ ಮಲ್ಲಮ್ಮನನ್ನು ಮಾತ್ರ ಸೋಲಿಸುವ ವಿಫಲನಾದ ಎಂದು ಆಕೆಯನ್ನು ಕೊಂಡಾಡಿದ್ದಾನೆ. ಈ ಲೇಖನದ ಆರಂಭದಲ್ಲಿ ವಿಶ್ವದ ಇತಿಹಾಸದಲ್ಲಿ ಎಲ್ಲೋ ಕೆಲವು ಸ್ತ್ರೀಯರು ಮಾತ್ರ ಸ್ತ್ರೀ ಸೈನ್ಯದ ನಾಯಕಿಯರಾಗಿ ಯುದ್ಧ ಮಾಡಿದ್ದು ದಾಖಲಾಗಿದೆ. ಭಾರತದಲ್ಲಿ ಹಲವರು ಸ್ತ್ರೀಯರು ಯೋಧರಂತೆ ರಣರಂಗದಲ್ಲಿ ಕಾದಾಡಿದರೂ, ಮಲ್ಲಮ್ಮನಂತೆ ತಾವೇ ಸ್ವತಃ ಸ್ತ್ರೀ ಸೈನ್ಯವನ್ನು ಕಟ್ಟಿ ಅದರ ಸೇನಾನಿಯಾಗಿ ಹೋರಾಡಿ ದೊಡ್ಡ ರಾಜರು ಅಥವಾ ಚಕ್ರವರ್ತಿಗಳನ್ನು ಸೋಲಿಸಿದ್ದು ಭಾರತದಲ್ಲಿ ಅದೇ ಮೊದಲು. ಬೆಳವಡಿ ಮಲ್ಲಮ್ಮನಿಗೆ ಸಾಟಿ ಬೆಳವಡಿ ಮಲ್ಲಮ್ಮನೇ. ಅವಳು ಕರ್ನಾಟಕದ ಏಕೆ, ಇಡೀ ಭಾರತದ ಹೆಮ್ಮೆ, ವಿಶ್ವದ ಹೆಮ್ಮೆ. ಅಂತಹ ಮಲ್ಲಮ್ಮನ ಬಗ್ಗೆ ಒಂದು ರೋಚಕ ಚಲನಚಿತ್ರ ಮಾಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್‌ ಕುಮಾರ್ ಅವರಿಗೆ ಸಲಹೆ ನೀಡಲಾಗಿದೆ. ಅವಳ ಒಂದು ಶಿಲಾಪ್ರತಿಮೆಯನ್ನು ಬೆಂಗಳೂರು ಪುರಭವನದ ಎಡಕ್ಕೆ ಈಗ ಇರುವ ಕಿತ್ತೂರು ಚನ್ನಮ್ಮ ಪ್ರತಿಮೆಗೆ ಸಂವಾದಿಯಾಗಿ ಸ್ಥಾಪಿಸಲು ಕರ್ನಾಟಕ ಸರಕಾರಕ್ಕೆ ಮನವಿ ಮಾಡಲಾಗಿದ್ದು. ಸರಕಾರ ಅದಕ್ಕೆ ಸ್ಪಂದಿಸಿದೆ. ಮರೆಯಬಾರದು- ಕನ್ನಡಿಗರಿಗೆ ಮಲ್ಲಮ್ಮನ ಧೈರ್ಯ, ಶೌರ್ಯ, ಕೆಚ್ಚು ಇವು ಒಂದು ಸ್ಪೂರ್ತಿ, 'ನಿನ್ನೆಯನ್ನು ಮರೆತವನು ಇಂದು ಬೆಳಗಲಾರ, ನಾಳೆ ಬೆಳೆಯಲಾರ'.

No comments:

Post a Comment