Tuesday 11 March 2014

ಆಧುನಿಕ ಮಹಿಳೆ

ಆಧುನಿಕ ಮಹಿಳೆ


ಮಹಿಳೆ ಇಂದು ಬದಲಾಗಿದ್ದಾಳೆ, ಬದಲಾಗುತ್ತಿದ್ದಾಳೆ. ಆಧುನಿಕ ಸಮಾಜದಲ್ಲಿ ಹೆಣ್ಣು ಮುಂದುವರಿದಿದ್ದಾಳೆ, ಮುಂದುವರಿಯುತ್ತಿದ್ದಾಳೆ. ಆಕೆಯ ಸ್ಥಾನಮಾನ ಬದಲಾಗಿದೆ. ಒಟ್ಟು ಸಮಾಜದ ಬದಲಾವಣೆಯ ಒಂದು ಭಾಗ ಇದು. ಒಳಗಡೆ ಹೊಕ್ಕರೆ ಅಲ್ಪಸ್ವಲ್ಪ ಹುಳುಕುಗಳಿವೆ ನಿಜ. ಆದರೆ ಮೇಲುನೋಟಕ್ಕೆ ಕಾಣುವ ಹಾಗೆ ಮಹಿಳೆಯ ಸ್ಥಿತಿ-ಗತಿಯಲ್ಲಿ ಇಂದು ಮಹತ್ತರ ಬದಲಾವಣೆ ಕಾಣಬಹುದು. ಮಹಿಳೆ ಇಂದು ಸ್ವಸಾಮರ್ಥ್ಯದಿಂದಲೇ ಪುರುಷನಿಗೆ ಸರಿಸಾಟಿಯಾಗಿ ನಿಂತಿದ್ದಾಳೆ. ಸಮಾನತೆ ಸಾಧಿಸುವತ್ತ ದೃಢಹೆಜ್ಜೆ ಇಟ್ಟಿದ್ದಾಳೆ. ಇದು ನನ್ನ ಬಲವಾದ ನಂಬಿಕೆ.
ಇದು ಯಾವುದೋ ಒಂದು ಕ್ಷೇತ್ರಕ್ಕೆಸಂಬಂಧಪಟ್ಟ ಮಾತಲ್ಲ. ಶಿಕ್ಷಣದಲ್ಲಿ ಇರಬಹುದು, ಉದ್ಯೋಗದಲ್ಲಿ ಇರಬಹುದು, ವ್ಯವಹಾರದಲ್ಲಿ ಆಗಬಹುದು. ಮಹಿಳೆಯರು ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ರಾಜಕಾರಣಿಯಾಗಿ, ಸಾಮಾಜಿಕ ಚಿಂತಕನಾಗಿ ನಾನು ನೂರಾರು ಹಳ್ಳಿಗಳನ್ನು ಸುತ್ತಾಡುತ್ತೇನೆ. ನಮ್ಮ ರಾಜ್ಯದ ಸ್ಥಿತಿ-ಗತಿಯನ್ನೇ ನೋಡುವುದಾದರೆ, ಕೇವಲ 25 ವರ್ಷಗಳ ಹಿಂದೆ ಹಳ್ಳಿಯ ಹೆಣ್ಣು ಮಕ್ಕಳಲ್ಲಿ ಸೆಲ್ವಾರ್ ಕಮೀಜ್, ನೈಟಿ ನೋಡಿಯೇ ಇಲ್ಲ. ಆದರೆ ಇಂದು ಎಷ್ಟು ಧೈರ್ಯವಾಗಿ ಅವುಗಳನ್ನು ತೊಟ್ಟುಕೊಂಡು ತಿರುಗಾಡುತ್ತಾರೆ. ಇದೊಂದು ಸಾಂಕೇತಿಕ ಉದಾಹರಣೆ ಅಷ್ಟೆ. ಆದರೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಇದು ಮುಖ್ಯವಾದ ವಿಷಯ.
ಸಮಾಜದಲ್ಲಿನ ಘೋಷಿತ ಹಾಗೂ ಅಘೋಷಿತ ಪದ್ಧತಿಗಳು ಬದಲಾಗಿವೆ. ಸಮಾಜವೂ ಇದನ್ನು ಒಪ್ಪುತ್ತದೆ ಎಂದಾಯ್ತು. ಹೆಣ್ಣನ್ನು ಒಂದು ಕಡೆ ಸಂಪ್ರದಾಯದ ‘ಫ್ರೇಮ್’ ಹಾಕಿಸಿ ಕೂರಿಸುವಂತಹ ಪುರೋಹಿತಶಾಹಿಗಳಿಗೆ ಇದು ತಲೆನೋವು ತರುವ ವಿಚಾರವೇ. ಅಂದರೆ ಮಹಿಳೆ ಇಂತಹ ಸಾಂಪ್ರದಾಯಿಕ, ಸನಾತನ ಕಲ್ಪನೆಗಳನ್ನು ದಾಟಿ ಹೊರಬಂದಿದ್ದಾಳೆ.
ಈ ಬೆಳವಣಿಗೆಯನ್ನು ಗಮನಿಸಿದರೆ ಒಂದೆರಡು ಜನರೇಷನ್ ಬದಲಾಗಿದೆ ಎಂದಾಯ್ತು. ಇದನ್ನು ಫ್ಯಾಷನ್ ಅಂತ ಕರೆಯಲಾಗದು. ‘ಡಿಫಯನ್ಸ್’  (defiance) ಅಂದರೆ ಧಿಕ್ಕರಿಸುವ ಸಂಕೇತ ಅಂತಲೂ ಹೇಳಲಾಗದು. ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು, ಹೊಸತನವನ್ನು ತೋರುವ ಕುತೂಹಲಕಾರಿ ಬೆಳವಣಿಗೆ ಎನ್ನಬಹುದು. ಈ ಬೆಳವಣಿಗೆ ಇಡೀ ದೇಶದಲ್ಲೇ ಆಗಿದೆ. ಆಧುನಿಕ ಪ್ರಪಂಚಕ್ಕೆ ಸ್ಪಂದಿಸುತ್ತಿರುವ ಮಹಿಳೆಯ ಸ್ವರೂಪ ಇದು.
ಜಾಗೃತ ಮಹಿಳೆ...
ಮಹಿಳೆಗೆ ನ್ಯಾಯವಾಗಿ ಸಲ್ಲಬೇಕಾದ ಅಧಿಕಾರ, ಸ್ವಾತಂತ್ರ್ಯ ಇತ್ತೀಚಿನ ದಿನಗಳಲ್ಲಿ ಸಿಗತೊಡಗಿದೆ ಎನ್ನಬಹುದು. ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಮಹಿಳೆ ಜಾಗೃತಳಾಗುತ್ತಿರುವುದೂ ಇದಕ್ಕೆ ಕಾರಣ. ಟಿವಿ, ಮಾಧ್ಯಮಗಳ ಪ್ರಭಾವವನ್ನೂ ಇದರಲ್ಲಿ ಗುರುತಿಸಬಹುದು. ಈಗ ಕೂತೆಡೆಗೇ ಎಲ್ಲವೂ ಲಭ್ಯ.
ಕನ್ನಡದಲ್ಲೇ ಏಳೆಂಟು ಟಿವಿ ಚಾನೆಲ್‌ಗಳಿವೆ. ಕೃಷಿ, ರಾಜಕಾರಣ, ನಿತ್ಯ ಜೀವನದ ಎಲ್ಲ ಕ್ರಾಂತಿಕಾರಿ ಮಾಹಿತಿಗಳೂ ಬೆರಳತುದಿಯಲ್ಲಿ ಸಿಗುತ್ತವೆ. ಕೆಟ್ಟದ್ದಿರಲಿ, ಕಿಲುಬಿರಲಿ ಅದರ ಬಗ್ಗೆ ಆಲೋಚನೆಗೆ ಪ್ರಚೋದಿಸುವ ಚಿತ್ರಣಗಳು ಬರ್ತಾ ಇವೆ. ಇದು ಬರೀ ಅಡುಗೆ ಮನೆ ಅಥವಾ ಊಟದ ಮನೆ ಪ್ರಪಂಚ ಅಲ್ಲ. ಮಾಹಿತಿ ಜೊತೆಗೆ ಜಾಗೃತಿ ಯುಗವಾಗಿಯೂ ಪರಿಣಮಿಸಿದೆ.
ಎಲ್ಲವೂ ಬದಲಾಗಿಬಿಟ್ಟಿದೆಯೇ?
ಇಲ್ಲ, ಹಲವರಲ್ಲಿ ಇನ್ನೂ ಹಳೆಯತನ ಉಳಿದುಬಂದಿರಬಹುದು. ಆಯ್ಕೆ ವಿಚಾರ ಇದು. ಆದರೆ ಎಲ್ಲರಿಗೂ ಒಂದು ರೀತಿಯ ‘ಎಕ್ಸ್‌ಪೋಷರ್’ ಸಿಗ್ತಾ ಇದೆ. ಲೈಫ್‌ಸ್ಟೈಲ್ ಮೇಲೆ ಇದು ಪ್ರಭಾವ ಬೀರ್ತಾ ಇದೆ. ಪ್ರಶ್ನೆ ಕೇಳುವ ಮನೋಭಾವ ಬರ್ತಾ ಇದೆ. ಇದು ಬಹಳ ಮುಖ್ಯ ಬದಲಾವಣೆ ಅಂತ ನನಗನಿಸ್ತಿದೆ.
ದುಡಿಯುವ ಮಹಿಳೆಯರಲ್ಲೇ ಬೇರೆ ಬೇರೆ ರೀತಿ ಇದೆ. ಕಚೇರಿ, ಕೂಲಿ. ಮನೆ ಕೆಲಸ, ಸ್ವಂತ ಉದ್ಯೋಗ, ವೈದ್ಯೆ, ವಕೀಲೆ, ಉನ್ನತ ಅಧಿಕಾರಿ ವರ್ಗ ಹೀಗೆ ನಾನಾ ವರ್ಗಗಳನ್ನು ಗುರುತಿಸಬಹುದು. ಶಾಲಾ ಶಿಕ್ಷಕಿ ಎಂಬುದಂತೂ ಈಗ ಸಾಮಾನ್ಯ ಪ್ರೊಫೆಷನ್ ಆಗಿದೆ.
ಸಮಾಜಕ್ಕೆ ಭದ್ರವಾದ ಕಿಟಿಕಿ ಇದ್ದ ಹಾಗೆ ಇದು. ಬೇರೆ ಬೇರೆ ಇಲಾಖೆಗಳ ಜೊತೆಗೆ ಸಂಪರ್ಕಕ್ಕೆ ಹಾಗೂ ಮಾಹಿತಿ ಲೋಕಕ್ಕೆ ಮಹಿಳೆ ಇಂದು ತನ್ನನ್ನು ತಾನು ತೆರೆದುಕೊಳ್ಳುತ್ತಿದ್ದಾಳೆ. ಹೊರಗಿನ ಪ್ರಪಂಚದ ಜೊತೆಗೆ ನೇರ ಸಂಪರ್ಕ, ಸಮನ್ವಯ ಸಾಧಿಸುತ್ತಾಳೆ. ಸ್ವಂತ ಉದ್ಯೋಗ ಅಥವಾ ಉದ್ಯಮ ಇದ್ದರೆ ಮಹಿಳೆ ಅದರಲ್ಲಿ ತೊಡಗಿಸಿಕೊಳ್ಳುವ ರೀತಿ ಅದ್ಭುತವಾದ್ದು. ಅವೇಕ್ ಸಂಸ್ಥೆಯ ಪದ್ಮಾ ಶೇಷಾದ್ರಿ, ಕಲೆಯಲ್ಲಿ ವಿಮಲಾ ರಂಗಾಚಾರ್.. ಹೀಗೆ ಹಲವರನ್ನು ಇಲ್ಲಿ ಉಲ್ಲೇಖಿಸಬಹುದು. ಜಾಗತಿಕ ಮನ್ನಣೆ ಗಳಿಸಿಕೊಡುತ್ತಿರುವ ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಸಿಗುತ್ತಾರೆ. ಇದು ಅನಿರ್ಬಂಧಿತ ಸ್ವಾತಂತ್ರ್ಯದ ಫಲ.
ರಾಜಕೀಯ, ಕಲೆ, ಸಾಹಿತ್ಯ, ಸಂಸ್ಕೃತಿ, ಸಂಶೋಧನೆ ಎಲ್ಲ ಕ್ಷೇತ್ರದಲ್ಲೂ ಇಂದು ಮಹಿಳೆಯ ಪಾಲ್ಗೊಳ್ಳುವಿಕೆ ಪ್ರಬಲವಾಗಿದೆ. ಅದನ್ನು ಪುರುಷ ನಿರಾಕರಿಸಲಾಗದಷ್ಟು ಪರಿಣಾಮಕಾರಿಯಾಗಿ ಆಕೆ ನಿರ್ವಹಿಸುತ್ತಿದ್ದಾಳೆ. ನನ್ನ ಪತ್ನಿ ಲಕ್ಷ್ಮಿಯೇ ಇದಕ್ಕೆ ಸಾಕ್ಷಿ. ಅಧ್ಯಾಪನ, ರಾಜಕೀಯ, ಕಲೆ.. ಹೀಗೆ ಆಕೆಯ ಕ್ರಿಯಾಶೀಲ ಬದುಕಿನ ಜೊತೆಗೆ ಮಕ್ಕಳ ವ್ಯಕ್ತಿತ್ವವನ್ನು ಕೂಡ ಅದೇ ರೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾಳೆ.
ಎಲ್ಲವೂ ಚೆನ್ನಾಗಿದೆಯೇ?
ಹೀಗೆಂದ ಮಾತ್ರಕ್ಕೆ ಸಮಾಜವೆಲ್ಲ ಬಹಳ ಚೆನ್ನಾಗಿದೆ ಎಂದು ಹೇಳಲಾರೆ. ಶೇಕಡಾ 90ರಷ್ಟು ಮನೆಯೊಳಗಿನ ಜವಾಬ್ದಾರಿ ಮಹಿಳೆಗೇ ಬರುತ್ತದೆ. ಅದನ್ನು ದಾಟಬೇಕು. ನಾವು ಅಂದರೆ ಪುರುಷರು ಅವರನ್ನು ಹೇಗೆ ನೋಡುತ್ತೇವೆ ಎನ್ನುವುದೂ ಮುಖ್ಯ. ತಾರ್ಕಿಕವಾಗಿ ನೋಡಿದ್ರೆ ಪತ್ನಿಗೆ ಸಮಾಜದ ಹಾಗೂ ನನ್ನ ಬಗ್ಗೆ ಎಲ್ಲವನ್ನೂ ‘ಇನ್‌ಫಾರ್ಮ್‌ಡ್’ ಆಗಿ ಇಡಲು ಬಯಸುತ್ತೇನೆ. ಆಕೆಯೂ ಸಮಾಜಕ್ಕೆ ‘ಕಮಿಟೆಡ್’ ಆಗಿ ಇರಲು ಪ್ರೋತ್ಸಾಹಿಸುತ್ತೇನೆ. ಅದಿಲ್ಲದೆ ಇದ್ದರೆ ಆಭಾಸ ಅನಿಸ್ತದೆ. ಇದೊಂದು ರೀತಿ ‘ಪ್ರೈಡ್’ ನನಗೆ. ಆ ರೀತಿಯ ಭಾವನೆ ನನ್ನಲ್ಲಿ ಬರ್ತದೆ ಅನ್ನೋದು ಮುಖ್ಯವಲ್ಲ, ಎಲ್ಲರಲ್ಲೂ ಬರಬೇಕು. ನನ್ನ ಕೌಟುಂಬಿಕ ವ್ಯವಸ್ಥೆಯನ್ನು ಆ ರೀತಿ ರೂಪಿಸಿಕೊಂಡಿದ್ದೇನೆ ಎಂಬ ಅಭಿಮಾನ ಇದೆ.
ಬದಲಾವಣೆಗೆ ಪ್ರೇರಣೆ...
ಸ್ತ್ರೀ ಶಕ್ತಿ ಮತ್ತು ಮಹಿಳಾ ಸ್ವಸಹಾಯ ಗುಂಪುಗಳೂ ಸಮಾಜದಲ್ಲಿ ಇಂದು ಅಮೂಲಾಗ್ರವಾದ ಬದಲಾವಣೆಗೆ ಪ್ರೇರಣೆ ಆಗುತ್ತಿವೆ. ಪುರುಷರಿಗೆ ಮಾದರಿಯಾಗಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ.
ಹಳ್ಳಿಗಳಲ್ಲಿ ಜಾಗೃತಿ ಮೂಡಿದೆ. ಮಹಿಳೆಯರು ಜಾಣರಾಗಿದ್ದಾರೆ. ಉಳಿತಾಯ ಮನೋಭಾವ ಹೆಚ್ಚಿದೆ. ಸಾಮಾಜಿಕ ಪ್ರಜ್ಞೆ ಜಾಗೃತವಾಗಿದೆ. ಸಂಘಟನೆಯಂದ ಬಂದ ಶಕ್ತಿ ಇದು. ಇದೊಂದು ಗಮನಾರ್ಹ ಬದಲಾವಣೆ. ಅಧಿಕಾರ ವಿಕೇಂದ್ರೀಕರಣ ಮತ್ತು ಮಹಿಳಾ ಮೀಸಲಾತಿಯಿಂದಾಗಿ ಪಂಚಾಯತ್ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಮಹಿಳೆಯ ಪ್ರಾಧಾನ್ಯ ಹೆಚ್ಚಾಗಿದೆ. ಗ್ರಾಮೀಣ ಅಭಿವೃದ್ಧಿಯಲ್ಲಿ ಆಕೆ ನಿರ್ಣಾಯಕ ಪಾತ್ರ ವಹಿಸಿದ್ದಾಳೆ. ವ್ಯಕ್ತಿತ್ವ ಬೆಳವಣಿಗೆಗೂ ಇದು ಸಹಕಾರಿ. ಸಮಾಜಕ್ಕೂ ದೊಡ್ಡ ಕೊಡುಗೆಯಾಗಿದೆ.
ಇರುವ ಅವಕಾಶ, ಸ್ವಾತಂತ್ರ್ಯ ಬಳಸಿಕೊಂಡು ಮಹಿಳೆ ಬೆಳೆಯುತ್ತಿದ್ದಾಳೆ. ಇದರ ಇಂಪ್ಯಾಕ್ಟ್ ನೋಡಬೇಕು. ಸ್ಕೇಲ್ ಇಟ್ಟುಕೊಂಡು ಇದನ್ನು ಅಳೆಯಲಾಗದು. ಆದರೆ ಸಾಧನೆ ದೊಡ್ಡದು. ಕೌಟುಂಬಿಕ ವ್ಯವಸ್ಥೆಯಲ್ಲಿದ್ದರೂ ಅವಲಂಬಿತ ಜೀವನ ಅಗತ್ಯ ಇಲ್ಲದ ರೀತಿ ಮಹಿಳೆಯರು ಬದುಕುತ್ತಿದ್ದಾರೆ. ಇದನ್ನು ಗಮನಿಸಬೇಕು. ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸ್ವಾವಲಂಬನೆ ಬಂದ ಮೇಲೆ ಸಮಾಜದಲ್ಲಿ ಮಹಿಳೆಯ ಸ್ಥಿತಿ-ಗತಿ ಸಾಕಷ್ಟು ಬದಲಾಗಿದೆ ಎಂಬುದಂತು ಸತ್ಯ.
ವಾದ-ವಿವಾದ, ಮನೆ ಜಗಳ ಆದರೆ ತಕ್ಷಣಕ್ಕೆ ಮನೆ ಬಿಟ್ಟು ಓಡಿಹೋಗಲಾಗದು. ಮಹಿಳೆಗೂ ಅಷ್ಟೆ, ಪುರುಷರಿಗೂ ಅಷ್ಟೆ. ಸ್ವಂತಿಕೆಗೆ ಅವಕಾಶ ಕೊಡಬೇಕು. ಒಬ್ಬರನ್ನೊಬ್ಬರು ಗೌರವಿಸಬೇಕು. ಅಭಿಪ್ರಾಯಗಳನ್ನು ಸ್ವೀಕರಿಸಬೇಕು. ಇದು ಪುರುಷರು ಮಾಡಬೇಕಾದ ಕೆಲಸ. ಸಾಮರಸ್ಯ ಅಡುಗೆ ಮನೆಯಿಂದಲೇ ಬೆಳೆಯಬೇಕು. ಈ ನಿಟ್ಟಿನಲ್ಲಿ ಆಗಬೇಕಾದ್ದು ಇನ್ನೂ ಬಹಳಷ್ಟಿದೆ. ಆ ನಿರೀಕ್ಷೆ ಅಂತೂ ನನ್ನಲ್ಲಿದೆ. ಚರಿತ್ರೆಯೇ ಅದನ್ನು ಸಾರಿ ಹೇಳುತ್ತದೆ.

No comments:

Post a Comment