Tuesday 28 May 2013


ಪರಿಣಾಮಕಾರಿ ಬೋಧನೆಗೆ ಅತ್ಯಾವಶ್ಯಕ ಅಂಶಗಳು
ಬೋಧನೆ ಎಂಬುದು ಒಂದು ಕಲೆ ಆದರೆ ಅದರಲ್ಲಿ ಎಲ್ಲರೂ 10ಕ್ಕೆ 10 ಅಂಕವನ್ನು ಪಡೆಯ ಬಲ್ಲ ಕಲಾವಿದರಾಗಲಾರರು.  ಏಕೆಂದರೆ ಕೆಲವರು ಬೋಧನೆಯನ್ನು ಪರಿಸ್ಥಿತಿಯ ಆವಶ್ಯಕತೆಗೆ ಒಳಪಟ್ಟು ಕೈಗೊಳ್ಳುತಾರೆಯೇ ಹೊರತು ತಾವೆ ಇಷ್ಟಪಟ್ಟು ಕೈಗೊಳ್ಳುವುದಿಲ್ಲ.  ಹೀಗಿದ್ದರೂ ಒಂದಂತೂ ನಿಜ ಅವರೂ ಶಿಕ್ಷಕರೇ.  ಒಬ್ಬ ವ್ಯಕ್ತಿ ತಾನು ಶಿಕ್ಷಕನಾದ ಕೂಡಲೇ ಮನಗಾಣ ಬೇಕಾದ ಒಂದು ಮುಖ್ಯ ಅಂಶವೆಂದರೆ ಈ ವೃತ್ತಿ  ಭವಿಷ್ಯದ ಪೀಳಿಗೆಯ ಮೇಲೆ ಪರಿಣಾಮ ಬೀರುವಂತಹುದು.  ಅವರನ್ನು ರೂಪಿಸುವಂತಹದು ಎಂಬುದು.  ಯಾವುದೇ ದೇಶವು  ಎಷ್ಟು ಒಳ್ಳೆಯದು ಎಂಬುದು ಅದು ಎಂಥಾ ಉಪಾಧ್ಯಾಯರನ್ನು ಒಳಗೊಂಡಿದೆ ಎಂಬುದನ್ನು ಅವಲಂಬಿಸುತ್ತೆ.  ಆದ್ದರಿಂದ ಒಂದು ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕನು ಬಲು ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ.  ವಿಶ್ವದ ಎಲ್ಲ ಸಮಾಜದಲ್ಲೂ  ಶಿಕ್ಷಕರಿಗೆ ಅತ್ಯಂತ ಗೌರವದ ಸ್ಥಾನವಿದೆ.  ನಮ್ಮ ದೇಶದಲ್ಲಂತೂಆಚಾರ್ಯ ದೇವೋ ಭವ ಅಂದರೆ ಗುರುವು ದೇವರಿಗೆ ಸಮಾನನಾದವನು ಎಂದು ಗೌರವಿಸುತ್ತೇವೆ.  ಆದ್ದರಿಂದ ಸಮಾಜವು ಗುರುಗಳಿಂದ ಸತ್ಪರಿಣಾಮವನ್ನು ನಿರೀಕ್ಷಿಸುತ್ತದೆ.  ಅಂದರೆ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ನೆರವಾಗುವುದೇ ಅಲ್ಲದೆ, ನೈತಿಕ ಮೌಲ್ಯಗಳು, ನಾಗರಿಕ ಪ್ರಜ್ಞಾವಂತಿಕೆ ಇವೆಲ್ಲವೂ ಅವರಲ್ಲಿ ಮೈಗೂಡುವಂತೆ ಮಾಡಬೇಕೆಂದು ನಿರೀಕ್ಷಿಸುತ್ತೇವೆ.
    ಶಿಕ್ಷಕನಾದವನು ಒಂದು ದೇಶದ ಮುನ್ನಡೆಯ ಹಾದಿಯನ್ನೇ ಬದಲಾಯಿಸಬಲ್ಲನು.  ಇಂದಿನ ಪ್ರಪಂಚದಲ್ಲಿ ಬೋಧನೆ ಎಂಬುದು ಹಿಂದೆಂದಿಗಿಂತಲೂ ಬಹಳ ಸಾಹಸದ ಸವಾಲಾಗಿರುತ್ತದೆ.  ತಾಂತ್ರಿಕ ಮುನ್ನಡೆ ಇಡಿ ವಿಶ್ವನ್ನೇ ಜಾಗತಿಕ ಹಳ್ಳಿಗಳನ್ನಾಗಿಸಿದೆ.  ಏನೇ ಪರಿಣಾಮವುಂಟಾದರೂ   ಅದನ್ನು ಜಾಗತಿಕ ದೃಷ್ಟಿ ಕೋನದಲ್ಲಿ ಪರಾಮರ್ಶೆ ಮಾಡಲಾಗುತ್ತದೆ.  ಈಗ ಅವಕಾಶಗಳು ಎಲ್ಲರಿಗೂ ತೆರೆದಿರುವ ಕಾರಣ ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ಒಬ್ಬರೊಂದಿಗೊಬ್ಬರು ಸ್ಪರ್ಧಿಸುತ್ತಿರುತ್ತಾರೆ.
     ಒಬ್ಬ ವಿದ್ಯಾರ್ಥಿಯು ಉತ್ತಮ ಸಾಧನೆ ಮಾಡಿದರೆ ಅದರ ಹಿಂದೆ ಪ್ರೇರಕ ಶಕ್ತಿಯಾಗಿ ಗುರುವಾದವನು ಇರುತ್ತಾನೆ.  ಒಬ್ಬ ವಿದ್ಯಾರ್ಥಿಯು ಉತ್ತಮ ಸಾಧನೆ ಮಾಡದೆ ಸೋತಾಗ ಆ ಸೋಲಿನ ಹಿಂದೆಯೂ ಶಿಕ್ಷಕನು ಇರುತ್ತಾನೆ.  ವಿದ್ಯಾರ್ಥಿಯಾದವನ ದೃಷ್ಟಿಕೋನ ಮತ್ತು ಭವಿಷ್ಯದ ಮೇಲೆ ಶಿಕ್ಷಕರು ಅಗಾಧ ಪರಿಣಾಮವನ್ನು  ಬೀರಬಲ್ಲರು.  ಇದಕ್ಕೆ ನಿದರ್ಶನಗಳು  ಇತಿಹಾಸದಲ್ಲಿ  ಅಪಾರವಾಗಿ ಸಿಗುತ್ತವೆ.  ಒಬ್ಬ ಸಾಮಾನ್ಯ ಬಾಲಕನನ್ನು ಹುರುದುಂಬಿಸಿ ಪಳಗಿಸಿ ಚಾಣಿಕ್ಯನು ಚಂದ್ರಗುಪ್ತ ಮೌರ್ಯನಂತಹ ಮಹಾನ್ ಚಕ್ರವರ್ತಿಯನ್ನಾಗಿಸಿದನು.  ಅಹಿಂಸೆಯನ್ನೇ ಅಸ್ತ್ರವನ್ನಾಗಿ ಇರಿಸಿಕೊಂಡು ಗಾಂಧೀಜಿ ಅವರು ಇಡೀ ದೇಶವು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡುವಂತೆ ಮಾಡಿದರು.  ಮಾಜಿ ರಾಷ್ಟ್ರಪತಿಗಳಾದ ಶ್ರೀ ಸರ್ವಪಳ್ಳಿ ರಾಧಾ ಕೃಷ್ಣ ಅವರು ಒಬ್ಬ ಶಿಕ್ಷಕ ಎಂದೇ ತಮ್ಮನ್ನು ಗುರುತಿಸಿ ಕೊಳ್ಳಲು ಇಚ್ಛಿಸುತ್ತಾರೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅನೇಕರಿಗೆ ಸ್ಪೂರ್ತಿ ನೀಡಿದ್ದಾರೆ ಮತ್ತು ಮಿಲಿಯಾಂತರ ಜನರಿಗೆ ಕನಸುಗಳನ್ನು ಕಂಡು ಅದನ್ನು ನನಸಾಗಿಸಲು ಕಂಕಣಬದ್ಧರಾಗುವಂತೆ ಸ್ಪೂರ್ತಿ ನೀಡುತ್ತಿದ್ದಾರೆ.
     ಒಬ್ಬ ಮಹಾನ್ ಶಿಕ್ಷಕನ ಗುಣ ವಿಶೇಷಗಳು ಎಲ್ಲಾ ಶಿಕ್ಷಕರಲ್ಲೂ ಇರಬೇಕು.  ಒಬ್ಬ ಶಿಕ್ಷಕನಾದವನು ಉತ್ತಮ ಮತ್ತು ಪರಿಣಾಕಾರಿ ಬೋಧನೆಯನ್ನು ನೀಡಬೇಕು.  ಪರಿಣಾಮಕಾರಿಯಾಗಿ ಬೋಧನೆ ನೀಡಿದಾಗ ಮಾತ್ರ ಕಲಿಯುವವ ಇನ್ನೂ ಹೆಚ್ಚು ಕಲಿಯಲು ಸಾಧ್ಯ.  ಪರಿಣಾಮಕಾರಿ ಬೋಧನೆಗೆ ಇದಮಿಥ್ಥಂ ಎಂದು ಹೇಳುವ ಯಾವುದೇ ಏಕಮಾತ್ರ ಸೂತ್ರವಿಲ್ಲ.  ಏಕೆಂದರೆ ಆಯಾ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬುದನ್ನು ಶಿಕ್ಷಕನೇ ನಿರ್ಧರಿಸುತ್ತಾನೆ.  ಹೀಗಿದ್ದರೂ ಶಿಕ್ಷಕನಾದವನು ಹೆಚ್ಚು ಪರಿಣಾಮಕಾರಿಯಾಗಲು ಕೆಲವೊಂದು ಗುಣ ಲಕ್ಷಣಗಳಿವೆ.  ವಿವಿಧ ಸಂಶೋಧನೆಗಳಿಂದ ಕಂಡುಬಂದ ಅಂಥ ಕೆಲವೊಂದು ಗುಣ ವಿಶೇಷಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:
  • ಬೋಧಿಸಲು ತೀವ್ರ ಆಸಕ್ತಿ ಇರುವುದು:   ಒಬ್ಬ ಶಿಕ್ಷಕನಿಗೆ ಬೋಧಿಸಲು ತೀವ್ರ ಆಸಕ್ತಿ ಇರಬೇಕು.  ಆತ ಅಥವಾ ಆಕೆಯು ತಾನು ಶಿಕ್ಷಕ/ಕಿ ಎಂಬ ಬಗ್ಗೆ ಹೆಮ್ಮೆ ಪಡಬೇಕು;
  • ಸಂಭಾಷಣೆ :  ಶಿಕ್ಷಕನಾದವನು ಬಹಳ ಉತ್ತಮ ಭಾಷಣಕಾರನಾಗಿರಬೇಕು, ಚೆನ್ನಾಗಿ ಕೇಳುವವನಾಗಿರಬೇಕು ಮತ್ತು ಉತ್ತಮವಾಗಿ ವಿಷಯ ತಿಳಿಸುವವನಾಗಿರಬೇಕು, ಆತ/ಆಕೆಯು ವಿದ್ಯಾರ್ಥಿಗಳು ಕೇಳಲು, ಮಾತನಾಡಲು, ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಬಹಳಷ್ಟು ಅವಕಾಶ ನೀಡಬೇಕು;
  • ನಮ್ರತೆ:  ಉಪಾದ್ಯಾಯರು ತಮ್ಮ ಪಾಠಯೋಜನೆಯನ್ನು  ಕಾರ್ಯಗತಗೊಳಿಸುವಾಗ ಮಕ್ಕಳ ಕಲಿಕೆಯ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಲು ಮತ್ತು ಮರು ವಿನ್ಯಾಸಗೊಳಿಸಲು ಸಮರ್ಥನಿರಬೇಕು;
  • ಪರಿಣಾಮಕಾರಿ ಮುಖಂಡ:  ಶಿಕ್ಷಕನಾದವನು ಮಕ್ಕಳನ್ನು ನೇತಾರನಾಗಿ ಅಥವಾ ಬೆಂಬಲವಾಗಿ ಮತ್ತು ಕೆಲವೊಮ್ಮೆ ಅವರೊಡನೆ ಬೆರೆತು ಅವರನ್ನು ಮುನ್ನಡೆಸ ಬೇಕಾಗಿರುವುದರಿಂದ ಆತ ಬಲು ಸಮರ್ಥ ಮುಖಂಡನಾಗಿರಬೇಕು;
  • ಹಾಸ್ಯಪ್ರಜ್ಞೆ:  ತರಗತಿಯ ಬಿಗುವಾತಾವರಣ ಅಥವಾ ಮುಜಗರದ ವಾತಾವರಣವನ್ನು ತಿಳಿ ಮಾಡುವುದಕ್ಕಾಗಿ ತುಂಬ ಹಾಸ್ಯ ಪ್ರಜ್ಞೆಯನ್ನು ಹೊಂದಿರಬೇಕು;
  • ಸೃಜನಾತ್ಮಕತೆ:  ಶಿಕ್ಷಕನಾದವನು ತುಂಬ ಸೃಜನಾತ್ಮಕ ವ್ಯಕ್ತಿ ಆಗಿರಬೇಕು ಹೊಸ ಹೊಸ ವಿಷಯಗಳಿಗೆ ತೆರೆದ ಮನಸ್ಸಿನವನಾಗಿರಬೇಕು ಮತ್ತು ಮಕ್ಕಳಲ್ಲೂ ಸೃಜನಶೀಲತೆ ಹಾಗೂ ಹೊಸ ಹೊಸ ವಿಷಯಗಳಿಗೆ ತೆರೆದ ಮನಸ್ಸನ್ನು ಪ್ರೇರೇಪಿಸಬೇಕು;
  • ತಪ್ಪಾಗಿದ್ದರೆ ಅದನ್ನು ಒಪ್ಪಿಕೊಳ್ಳಲು ಸಿದ್ದನಿರಬೇಕು:  ಶಿಕ್ಷನು " ಅಹಂಬ್ರಹ್ಮಾಸ್ಮಿ" ಅಥವಾ ತಾನೇ ಸರ್ವಜ್ಞ  ಎಂದು ನಂಬಬಾರದು.  ಬೋಧಿಸುವಾಗ ತಾನು ತಪ್ಪೇಮಾಡುವುದಿಲ್ಲ ಎಂಬ ಅಹಂಭಾವ ವಿರಬಾರದು.  ಆತ ತಪ್ಪುಗಳನ್ನು ತನಗೆ ತೋರಿಸಿಕೊಟ್ಟಾಗ ಬಲು ನಯವಾಗಿ ಅದನ್ನು ಒಪ್ಪಿಕೊಳ್ಳಬೇಕು ಹಾಗೂ ಅದನ್ನು ಸರಿ ಪಡಿಸಿಕೊಳ್ಳಲು ಸಿದ್ದನಿರಬೇಕು;
  • ಕರ್ತವ್ಯ ಶ್ರದ್ಧೆ:   ಸಕಾಲದಲ್ಲಿ  ಕಾರ್ಯವನ್ನು ಮಾಡಿ ಮುಗಿಸಲು, ಕೆಲಸಗಳನ್ನು ಸಕಾಲದಲ್ಲಿ ಮುಗಿಸಲು ಶಿಕ್ಷಕನಾದವನು ಸ್ವಶಿಸ್ತು ಹೊಂದಿರಬೇಕು, ಕೆಲಸಕ್ಕೆ ನಿಯತವಾಗಿ ಸಕಾಲದಲ್ಲಿ ಬರಬೇಕು.  ಎಲ್ಲವನ್ನೂ ಕ್ರಮಬದ್ಧವಾಗಿ ನಡೆಸಲು ಸಿದ್ಧನಿರಬೇಕು;
  • ಸಕಾರಾತ್ಮಕ ನಿಲುವು:  ಶಿಕ್ಷಕನ ಸಕಾರಾತ್ಮಕ ನಿಲುವು ಮಕ್ಕಳಲ್ಲಿ ಸಕಾರಾತ್ಮಕ ಮನೋಭಾವವನ್ನು ಮೈಗೂಡಿಸಲು ಸಹಾಯ ಮಾಡುತ್ತದೆ;
  • ಸ್ವಪ್ರೇರಿತನಾಗಿರಬೇಕು:  ಶಿಕ್ಷಕನಾದವನು  ಚೈತನ್ಯಶೀಲನಾಗಿ ಸ್ವಪ್ರೇರಿತನಾಗಿರಬೇಕು ಮತ್ತು  ಮಕ್ಕಳನ್ನು ಹೇಗೆ ಪ್ರೇರೇಪಿಸಬೇಕೆಂಬುದನ್ನು ತಿಳಿದಿರಬೇಕು;
  • ಸಹಾನುಭೂತಿ ಪರನಾಗಿರಬೇಕು:  ಶಿಕ್ಷಕನು ಮಕ್ಕಳ ಯಶಸ್ಸು ಮತ್ತು ಸೋಲುಗಳನ್ನು ಸಹಾನುಭೂತಿಯಿಂದ ಹಂಚಿಕೊಳ್ಳಬೇಕು;
  • ನೈತಿಕ ಮೌಲ್ಯಗಳನ್ನು ಹೊಂದಿರಬೇಕು:  ಬೋಧನೆ ಎಂಬುದು ಒಂದು ಸವಾಲು ಮತ್ತು ಮಕ್ಕಳು ಶಿಕ್ಷಕರನ್ನು ಆದರ್ಶ ವ್ಯಕ್ತಿಯಾಗಿ ನೋಡುತ್ತಾರೆ.  ಆತನ ನಡವಳಿಕೆಯು ಮಕ್ಕಳ ಮೇಲೆ ಒಂದು ನಿಚ್ಚಳ ಪರಿಣಾಮವನ್ನು ಬೀರುತ್ತದೆ.  ಶಿಕ್ಷಕನು ಅತ್ಯಂತ ನೈತಿಕ ಮೌಲ್ಯಗಳನ್ನು ಪಾಲಿಸಬೇಕು.  ಆತನು ಹಾಗೆ ಪಾಲಿಸುತ್ತಿರುವುದು ಮಕ್ಕಳ ಗಮನಕ್ಕೆ ಬರಬೇಕು;
  • ವಿಶ್ವಾಸಾರ್ಹತೆ:  ಮಕ್ಕಳಿಗೆ ಅವರ ಶಿಕ್ಷಕರ ಬಗ್ಗೆ ನಂಬಿಕೆ ಬೆಳೆಯಬೇಕು.  ಇದು ಶಿಕ್ಷಕನಾದವನು ವಿಶ್ವಾಸಾರ್ಹನೆಂದು ಮನಗಂಡಾಗ ಮಾತ್ರ ಸಾಧ್ಯ;
  • ವ್ಯಕ್ತಿವ್ಯಕ್ತಿ ನಡುವಣ ಸಂಬಂಧದಲ್ಲಿ ಆತನು ಪರಿಣಾಮಕಾರಿಯಾಗಿರಬೇಕು:  ಮಕ್ಕಳು ಉಪಾಧ್ಯಾಯನನ್ನು ಶಾಶ್ವತವಾಗಿ ಮತ್ತು ಫಲಪ್ರದವಾಗಿ ಅಂಗೀಕರಿಸುವುದು ಸಾಧ್ಯವಾಗುವಂತೆ ಉಪಾಧ್ಯಾಯನು ವ್ಯಕ್ತಿ ವ್ಯಕ್ತಿ ನಡುವಣ ಸಂಬಂಧವನ್ನು ಹೇಗೆ ಬೆಳಸಬೇಕೆಂದು ತಿಳಿದಿರಬೇಕು;
  • ಯೋಜಿತ ಬೋಧನೆ:  ತನ್ನ ಬೋಧನೆಯ ಬಗ್ಗೆ ಉಪಾಧ್ಯಾಯನಿಗೆ ಸದಾ ಒಂದು ಯೋಜನೆಯನ್ನು  ಇಟ್ಟುಕೊಂಡು ಬರಬೇಕು.  ಅದರಲ್ಲಿ ಒಂದು ಬಗೆಯ ನವ್ಯತೆ ಇರಬೇಕು.  ತನ್ನ ಪಾಠ ಬೋಧನೆಯ ಗುರಿ, ಧ್ಯೇಯ, ಫಲಿತಾಂಶಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿರಬೇಕು;
  • ಉತ್ತಮ ಮೌಲ್ಯ ಮಾಪಕ:  ಶಿಕ್ಷಕನಾದವನು ಅನೇಕ ಬಗೆಯ ಮೌಲ್ಯಮಾಪಕ ತಂತ್ರಗಳನ್ನು ಬಳಸಲು ಪಳಗಿರಬೇಕು.  ಅದನ್ನು ಆಗಾಗ್ಗೆ ಬಳಸಬೇಕು.  ಅವನು/ಅವಳು ಮೌಲ್ಯಮಾಪನವನ್ನು ಮಕ್ಕಳಲ್ಲಿ ಕಲಿಕೆಯ ನ್ಯೂನತೆ ಗುರುತಿಸಲು ಮತ್ತು ಅದಕ್ಕೆ ತಕ್ಕ ಪರಿಹಾರೋಪಾಯಗಳನ್ನು ಒದಗಿಸಲು ಬಳಸಿಕೊಳ್ಳಬೇಕು;
  • ಮನೋವಿಜ್ಞಾನ ತಿಳಿದಿರಬೇಕು:  ಶಿಕ್ಷಕನು ಮನೋವಿಜ್ಞಾನದ ಸಿದ್ಧಾಂತಗಳು ಕಲಿಕೆಯ ಸಿದ್ಧಾಂತಗಳು, ವ್ಯಕ್ತಿ ಪ್ರವೃತ್ತಿಗಳು, ಕಲಿಕೆ ಶೈಲಿಗಳು ಮುಂತಾದವುಗಳ ಬಗ್ಗೆ ಅರಿತಿರಬೇಕು;
  • ಶಿಕ್ಷಕನು ಸದಾ ವಿದ್ಯಾರ್ಥಿಯೇ:  ಒಬ್ಬ ಉತ್ತಮ ಶಿಕ್ಷಕನು ಸದಾ ಉತ್ತಮ ವಿದ್ಯಾರ್ಥಿಯಾಗಿರುತ್ತಾನೆ.  ಈತನು ಬೋಧನಾ ಸಮಸ್ಯೆಗಳು, ಕಲಿಕೆ ಸಾಮಗ್ರಿ ಮತ್ತು ಮೌಲ್ಯ ಮಾಪನ ತಂತ್ರಗಳು ಮುಂತಾದವುಗಳ ಬಗ್ಗೆ ಅಂದಂದಿನವರೆಗಿನ ಬೆಳವಣಿಗೆಯನ್ನು ಓದಿ ಅರಿತುಕೊಂಡಿರಬೇಕು;
  • ಮಾಹಿತಿ ತಂತ್ರಜ್ಞಾನದಲ್ಲಿ ನುರಿತಿರಬೇಕು:  ತಾಂತ್ರ್ರಿಕ ಮುನ್ನಡೆಯು ಕಲಿಕೆಯನ್ನು ಒಂದು ಸಂತೋಷದಾಯಕ ಅನುಭವವನ್ನಾಗಿಸುತ್ತದೆ.  ಉಪಾಧ್ಯಾಯನಾದವನು ಅಂತರ್ಜಾಲದಲ್ಲಿ ದೊರಕುವ ಅನೇಕ ಕಲಿಕಾ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ತಿಳಿದಿರಬೇಕು.  ಆತ/ಆಕೆಯು ತನ್ನದೇ ಆದ ಬಹುಮಾಧ್ಯಮ ವಿಷಯ ನಿರೂಪಣೆಗಳನ್ನು ತಯಾರಿಸಲು ಸಿದ್ಧನಿರಬೇಕು;
  • ಸ್ಶಳೀಯವಾಗಿ ಯೋಚಿಸಿ ಜಾಗತಿಕವಾಗಿ ಕ್ರಿಯಾಶೀಲರಾಗಿ ಎಂಬ ನಿಲುವು:  ಶಿಕ್ಷಕರಾದವರು ಶಿಕ್ಷಣದ ಬಗ್ಗೆ ಇರುವ ಜಾಗತಿಕ ದೃಷ್ಟಿಕೋನವನ್ನು ಅರಿತಿರಬೇಕು;  ಆತ/ಆಕೆಯು ಜಾಗತಿಕ ದೃಷ್ಟಿಕೋನವನ್ನು  ಇಟ್ಟುಕೊಂಡು ಸ್ಥಳೀಯ ಸನ್ನಿವೇಶಗಳಲ್ಲಿ ಕ್ರಿಯಾಶೀಲರಾಗಿರಬೇಕು;ಆದ್ದರಿಂದ ಶಿಕ್ಷಕರಾಗಿ ವೃತ್ತಿ ನಡೆಸುತ್ತಿರುವವರು ಶಿಕ್ಷಕರಾಗ ಬೇಕೆಂಬ ಅಭೀಪ್ಸೆ ಹೊಂದಿರುವವರು ಉತ್ತಮ ಶಿಕ್ಷಕ ಸಾಮರ್ಥ್ಯ ಪಡೆಯಬೇಕಾದರೆ ಪರಿಣಾಮಕಾರಿ ಬೋಧನೆಗೆ ಅತ್ಯಾವಶ್ಯಕ ಅಂಶಗಳನ್ನು ರೂಢಿಸಿಕೊಳ್ಳಲು ಪ್ರಯತ್ನಿಸಬೇಕು.  ಶಿಕ್ಷಕರ ತರಬೇತಿ ಸಂಸ್ಥೆಗಳು ಮತ್ತು ಶಾಲಾ ಸಂಸ್ಥೆಗಳು ಶಿಕ್ಷಕರು ಅಂದಂದಿನ ಅಗತ್ಯಕ್ಕೆ ತಕ್ಕಂತೆ ಬೆಳೆಯಲು, ನೈಪುಣ್ಯ ಬೆಳಸಿಕೊಳ್ಳಲು ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಬೇಕಾದ ಸಾಧನೋಪಾಯಗಳನ್ನು ಒದಗಿಸಿಕೊಡಬೇಕು.

No comments:

Post a Comment